ತಲೆನೆತ್ತಿಯ ಗಜಕರ್ಣ  

	ಟ್ರೈಕೋಫೈಟಾನ್ ಮತ್ತು ಮೈಕ್ರೊಸ್ಪೊರಮ್ ಎಂಬ ಜಾತಿಯ ಅಣಬೆಗಳ ಸೋಂಕಿನಿಂದುಂಟಾದ ತಲೆನೆತ್ತಿಯ ಒಂದು ರೋಗ.  ಇದು ಶಾಲೆ ವಯಸ್ಸಿನ ಹುಡುಗರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಚರ್ಮದ ಸಂಪರ್ಕದಿಂದ ಅಥವಾ ಸೋಂಕು ಹತ್ತಿದ ಟೋಪಿಗಳ, ಚೌಕಗಳ, ಕುಂಚಗಳ ಮತ್ತು ಬಾಚಣಿಗೆಗಳ ಮೂಲಕವೂ ಒಬ್ಬರಿಂದೊಬ್ಬರಿಗೆ ಈ ಅಣಬೆಗಳ ಸೋಂಕು ಹರಡುತ್ತದೆ. ರೋಗಪೀಡಿತವಾದ ತಲೆನೆತ್ತಿಯ ಮೇಲೆ ನವೆಯುಳ್ಳ ಹಗರಿನ ಮಚ್ಚೆಗಳು ಕಾಣುತ್ತವೆ.  ಈ ಮಚ್ಚೆಗಳ ಮೇಲೆ ಹೊಳಪಿಲ್ಲದ ತುಂಡು ಕೂದಲುಗಳಿರುತ್ತವೆ. ಗ್ರೈಸೋಫಲ್ವಿನ್ ಮಾತ್ರೆಗಳ ಸೇವನೆ ಮತ್ತು ಅಣಬೆನಾಶಕ ಮುಲಾಮುಗಳನ್ನು ಹಚ್ಚುವುದರಿಂದ ಇದನ್ನು ಚಿಕಿತ್ಸಿಸಬಹುದು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ